ಹಣಕೋಣದ ಸಾತೇರಿ ದೇವಿ ವಾರ್ಷಿಕ ಉತ್ಸವ; ಸೆ.20 ರಿಂದ ಸಾರ್ವಜನಿಕರಿಗೆ ಅವಕಾಶ

ಕಾರವಾರ: ತಾಲೂಕಿನ ಹಣಕೋಣದ ಶ್ರೀ ಸಾತೇರಿ ಚಣಕಾದೇವಿ (ಕುಲದೇವಿ) ಮಂದಿರದ 2026ನೇ ಸಾಲಿನ ವಾರ್ಷಿಕ ಉತ್ಸವವು ಸೆ.18ರಿಂದ 24ರವರೆಗೆ ನಡೆಯಲಿದೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಿಯ ಗರ್ಭಗುಡಿಯ ದ್ವಾರವು ಸೆ.18ರಂದು ಮಧ್ಯರಾತ್ರಿ 12 ಗಂಟೆಗೆ ತೆರೆಯಲಿದ್ದು, ಸೆ.24ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.

ಸೆ.19ರಂದು ಊರಿನ ನಾಗರಿಕರಿಂದ ನವೆ ಅರ್ಪಣೆ, ಸಂಜೆ 4ಕ್ಕೆ ಕುಳಾವಿ ಬಾಂಧವರಿಂದ ‘ತಳಯಿ’ ಹಾಗೂ ಕುಳಾವಿಯ ಕುಮಾರಿ ಮತ್ತು ನವವಧುಗಳಿಂದ ‘ಅಡೇಕಿ’ ಅರ್ಪಣೆ ನಡೆಯಲಿದೆ. ಅಂದು ಕುಳಾವಿ ಜನರ ಧಾರ್ಮಿಕ ವಿಧಿ ಇರುವುದರಿಂದ ಹೊರ ಊರಿನ ಭಕ್ತರ ಸೇವೆ ಸ್ವೀಕರಿಸಲಾಗುವುದಿಲ್ಲ.

ಸೆ.20ರಿಂದ 24ರವರೆಗೆ ಬೆಳಿಗ್ಗೆ 8ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನ, ಹಣ್ಣು-ಕಾಯಿ, ಉಡಿ, ಹರಕೆ, ತುಲಾಭಾರ ಸೇರಿದಂತೆ ವಿವಿಧ ಸೇವೆಗಳಿಗೆ ಅವಕಾಶವಿದೆ. ಸೆ.24ರಂದು ಸಂಜೆ 5ರವರೆಗೆ ಮಾತ್ರ ಸೇವೆ ಸ್ವೀಕರಿಸಲಾಗುವುದು. ಸೆ.20ರಿಂದ ಪ್ರತಿದಿನ ಬೆಳಿಗ್ಗೆ 9ಕ್ಕೆ ದೇವಿಗೆ ಅರ್ಪಿಸಿದ ಸೀರೆ ಹಾಗೂ ಇತರ ವಸ್ತುಗಳ ಜಾಹೀರ ಅಲಾವು ನಡೆಯಲಿದೆ.

ಸೆ.21ರಿಂದ 24ರವರೆಗೆ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸೆ.20ರಿಂದ 23ರವರೆಗೆ ಸಂಜೆ 6.30ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಹಾಗೂ ರಾತ್ರಿ 9.30ಕ್ಕೆ ಪೂಜೆ ಮತ್ತು ತೀರ್ಥಪ್ರಸಾದ ವಿತರಣೆ ನಡೆಯಲಿದೆ.

ಭಕ್ತರು ಸಹಕುಟುಂಬ, ಸಹಪರಿವಾರ ಹಾಗೂ ಮಿತ್ರರೊಂದಿಗೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಹಾಗೂ ಉತ್ಸವ ಸಮಿತಿ ಮನವಿ ಮಾಡಿದೆ.